ದಾವಣಗೆರೆ ಜು 11: ಮಕ್ಕಳ ವಿದ್ಯಾಭ್ಯಾಸಕ್ಕೆ ಇಂದಿನ ಪೋಷಕರು ಎಲ್ಲಾ ರೀತಿಯ ಸಹಕಾರದ ಜೊತೆಗೆ ಎಲ್ಲಾ ತ್ಯಾಗಕ್ಕೂ ಸಿದ್ಧರಿರುತ್ತಾರೆ ಎಂದು ಜವಳಿ ವರ್ತಕ ಬಿ.ಸಿ. ಉಮಾಪತಿಯವರು ನುಡಿದರು.
ಅವರಿಂದು ಬಸವರಾಜಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ವೀರೇಶ್ವರ ದೇವಸ್ಥಾನ ಸಮಿತಿಯವರು ಏರ್ಪಡಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ನಾವು ಕಲಿಯದಿದ್ದರೆ ಏನಂತೆ ಮಕ್ಕಳಾದರೂ ಓದಲಿ ಎಂಬ ಪೋಷಕರ ಮನೋಭಾವವನ್ನು ಮಕ್ಕಳು ಅರಿತು ತಂದೆ ತಾಯಿಯರನ್ನು ದೇವರಂತೆ ಕಾಣಬೇಕೆಂದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ವಿದ್ಯಾಭ್ಯಾಸದ ನಂತರ ನಿಮ್ಮ ಗುರಿ ಕೆಲಸದ ಕಡೆ ಇರಬೇಕು. ಉನ್ನತ ಹುದ್ದೆಯತ್ತ ಕನಸು ಕಂಡು ನನಸು ಮಾಡಿಕೊಳ್ಳುವುದರ ಮೂಲಕ ಪೋಷಕರನ್ನು ಪೋಷಿಸಬೇಕು. ಅಂದಾಗ ಮಾತ್ರ ನಿಮ್ಮ ಕಲಿಕೆ ಸಾರ್ಥಕವಾಗುತ್ತದೆ. ಇಂದಿನ ಮಕ್ಕಳು ಪುಣ್ಯವಂತರು, ಭಾಗ್ಯವಂತರು. ನಿಮ್ಮ ಓದಿಗೆ ಪೋಷಕರು ಎಷ್ಟೇ ತೊಂದರೆ ,
ತಾಪತ್ರಯ ಇದ್ದರೂ ಕೂಡ ಸಾಲ ಮಾಡಿಯಾದರೂ ಓದಿಸುತ್ತಾರೆ. ನೀವುಗಳು ಮೊಬೈಲ್ ದಾಸರಾಗದೆ, ಸರ್ಕಾರಿ ಸೀಟು ಪಡೆಯುವಂತ ಚಿತ್ತ ಬೆಳೆಸಿಕೊಳ್ಳಬೇಕೆಂದರು.
ಹಿಂದೆ ನಮಗೆ ಓದಲು ಸಹಾಯ- ಸಹಕಾರವಿರಲಿಲ್ಲ. ಫೀಸ್ ಕಟ್ಟಲು ಪೋಷಕರು ಪೇಚಾಡುತ್ತಿದ್ದರು. ಓದಲು ಬೆಳಕೂ ಸಹ ಇರಲಿಲ್ಲ ಇಂದು ನಿಮಗೆ ಎಲ್ಲವೂ ಇದೆ. ಆದ್ದರಿಂದ ಓದಿನ ಜೊತೆಗೆ ಸಂಸ್ಕಾರವಂತರಾಗಬೇಕು. ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಬೆಳೆಯಬೇಕೆಂದರು.
ಕಾರ್ಮಿಕರು ಮತ್ತು ಶ್ರಮಜೀವಿಗಳೇ ಹೆಚ್ಚಾಗಿರುವ ಬಸವರಾಜಪೇಟೆಯಲ್ಲೊಂದು ಕಲ್ಯಾಣ ಮಂಟಪದ ಅವಶ್ಯಕತೆ ಇದೆ ಎಂಬ ಬೇಡಿಕೆಗೆ ಸ್ಪಂದಿಸಿದ ಉಮಾಪತಿಯವರು ಇದಕ್ಕೆ ತಮ್ಮ ಸಹಕಾರವೂ ಇದೆ ಎಂದು ಭರವಸೆ ನೀಡಿದರು.
ರೈಸ್ ಮಿಲ್ ವರ್ತಕ ಜಿ.ಎಸ್. ಉಳುವಯ್ಯ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೈ. ಬಿ. ಸತೀಶ್, ಶ್ರೀ ಮಂಜು ಪೇಂಟ್ಸ್ ನಾ ಅಂದನೂರು ಮುರುಗೇಶಪ್ಪ, ಶ್ರೀಶೈಲ ಮಲ್ಲಿಕಾರ್ಜುನ ಟ್ರೇಡರ್ಸ್ ನ ಮಾಲೀಕ ಹೆಚ್. ಎನ್. ನಾಗರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಬಿರಾದರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಸವೇಶ್ವರ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಬಿ. ಎಸ್. ಉಮಾರವರನ್ನು ಸನ್ಮಾನಿಸಿದರು.
ಆರಂಭದಲ್ಲಿ ಚಿ. ಸಮರ್ಥ್ ಪ್ರಾರ್ಥಿಸಿದರು ಎ.ಬಿ. ಸಿದ್ಧಲಿಂಗೇಶ್ ಸ್ವಾಗತಿಸಿದರು. ನಂತರ ಉಪಾಧ್ಯಕ್ಷರೂ “ಇಂದಿನ ಸುದ್ದಿ” ಸಂಪಾದಕರೂ ಆದ ವೀರಪ್ಪ. ಎಂ.ಭಾವಿ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಅಂತ್ಯದಲ್ಲಿ ಶಂಭುಲಿಂಗಪ್ಪ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಮ್ ದೊಡ್ಡಪ್ಪ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.