ದಾವಣಗೆರೆ:ದಾವಣಗೆರೆ ಲೀಡ್ ಬ್ಯಾಂಕಿನ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾಗಿದ್ದ ಶ್ರೀ ಎನ್.ಟಿ. ರ‍್ರಿಸ್ವಾಮಿಯವರು ರಚಿಸಿರುವ “ಮುಸ್ಟೂರು ಸದ್ಗುರು ಶ್ರೀ ಓಂಕಾರ ಹುಚ್ಚನಾಗಲಿಂಗ ಸ್ವಾಮಿಗಳು” ಎಂಬ ಕೃತಿಯನ್ನು ಮುಸ್ಟೂರಿನ ಶ್ರೀ ಓಂಕಾರೇಶ್ವರ ದಾಸೋಹ ಮಠದ ಆವರಣದಲ್ಲಿ ದಿನಾಂಕ: ೨೨-೦೨-೨೦೨೬ ರ ಭಾನುವಾರ ಸಂಜೆ ಲೋಕಾರ್ಪಣೆ ಗೊಳಿಸಲಾಯಿತು. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ. ರಘುಮೂರ್ತಿಯವರು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಾ ಹುಚ್ಚಪ್ಪಗಳ ಪರಂಪರೆಯನ್ನು ಹೊಂದಿರುವ ಮುಸ್ಟೂರು ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ ಆಧ್ಯಾತ್ಮ ಶಕ್ತಿಯಿಂದ ತಪೋಕ್ಷೇತ್ರವಾಗಿದೆ. ನಾನು ಹೈಸ್ಕೂಲು ಓದಿದ್ದು ಮುಸ್ಟೂರಿನ ಶ್ರೀ ಮಠದ ಶಾಲೆಯಲ್ಲಿಯೇ. ಪಕ್ಕದ ಹಳ್ಳಿಯವರಾದ ಎನ್.ಟಿ. ರ‍್ರಿಸ್ವಾಮಿಯವರು ವಿದ್ಯಾರ್ಥಿ ಇವರ ದೆಸೆಯಲ್ಲಿಯೇ ನನಗೆ ಮಾದರಿ ವ್ಯಕ್ತಿಯಾಗಿದ್ದರು. ಬ್ಯಾಂಕಿAಗ್ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಹಿರಿದಾದುದು. ಇಂತಹವರು ರಚಿಸಿರುವ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ ಕುರಿತಾದ ಕೃತಿ ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು. ಸಮಾಜಸೇವೆ ಮೊದಲಿನಷ್ಟು ಸುಲಭವಲ್ಲ. ಸ್ವಾರ್ಥ ಲಾಲಸೆಗಳೇ ತುಂಬಿದ ಇಂದಿನ ದಿನಮಾನಗಳಲ್ಲಿ ಮಠ ಮಾನ್ಯಗಳು, ರಾಜಕಾರಿಣಿಗಳು, ಯಾವುದೇ ಕ್ಷೇತ್ರದ ಪ್ರಮುಖರು ಪ್ರಾಮಾಣಿಕವಾಗಿ ಜನಸೇವೆ ಮಾಡಲು ಹತ್ತಾರು ಅಡ್ಡಿ ಆತಂಕ ಕಷ್ಟಗಳು ಎದುರಾಗುತ್ತವೆ. ಅವೆಲ್ಲವನ್ನು ಬದಿಗೆ ಸರಿಸಿ ನಾವು ಸಮಾಜಮುಖಿಗಳಾದಾಗಲೇ ಬದುಕು ಸಾರ್ಥಕ ಎಂಬುದನ್ನು ಅವರು ಸೋದಾಹರಣವಾಗಿ ವಿವರಿಸಿದರು. ರೇಖಲಗೆರೆಯ ಶ್ರೀ ದೇನಾಭಗತ್ ಗುರೂಜಿಯವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಧಾರ್ಮಿಕ ಕೃತಿಗಳು ಇಂದಿನ ಅಗತ್ಯವಾಗಿದೆ. ರ‍್ರಿಸ್ವಾಮಿಯವರು ಶ್ರೀಗಳ ಬಗ್ಗೆ ಬರೆದಿರುವ ಕೃತಿ ಸಾರ್ಥಕವಾದುದು. ಮುಸ್ಟೂರು ಮಠಕ್ಕೆ ತನ್ನದೇ ಆದ ಇತಿಹಾಸವಿದೆ. ಅದು ಮತ್ತೆ ಪ್ರಜ್ವಲಿಸುವಂತಾಗಲಿ ಎಂದು ಆಶಿಸಿದರು. ಕೃತಿಯ ಪ್ರಥಮ ಪ್ರತಿಗಳನ್ನು ಮುಸ್ಟೂರು ಮಠಕ್ಕೆ, ಗ್ರಂಥ ದಾಸೋಹಿಗಳಿಗೆ ಹಾಗೂ ಡಾ. ಜಿ.ಎಸ್.ವೇಣುಮಾಧವರವರಿಗೆ ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಇಂದು ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿಗಳ ೬೬ನೇ ಸಂಸ್ಮರಣೆ ಕಾರ್ಯಕ್ರಮವು ಹೌದು. ಇಂತಹ ಶುಭಸಂದರ್ಭದಲ್ಲಿ ರ‍್ರಿಸ್ವಾಮಿಯವರು ರಚಿಸಿರುವ ಕೃತಿ ಶ್ರೀ ಮಠದಲ್ಲಿಯೇ ಲೋಕಾರ್ಪಣೆಗೊಳ್ಳುತ್ತಿರುವುದು ಮಠದ ಗುರುಪರಂಪರೆಗೆ ಸಲ್ಲಿಸಿದ ಭಕ್ತಿಯಾಗಿದ್ದು ಇದು ಶ್ರೀ ಮಠಕ್ಕೆ ಮತ್ತು ಭಕ್ತರಿಗೆ ಸಂತೋಷವನ್ನುAಟುಮಾಡಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕರಿಬಸವೇಶ್ವರ ಗದ್ದುಗೆ ಮಠದ ಪೂಜ್ಯ ಪರಮೇಶ್ವರ ಸ್ವಾಮಿಗಳು, ಹಿರೇಮಠದ ಶ್ರೀ ಷ.ಬ್ರ. ವೀರೇಶ್ವರ ಶಿವಾಚಾರ್ಯರು, ನಿವೃತ್ತ ಉಪನ್ಯಾಸಕರು ಹಾಗೂ ಗ್ರಂಥ ದಾಸೋಹಿಗಳಾದ ಶ್ರೀ ಡಿ.ಸಿ.ಮಲ್ಲಿಕಾರ್ಜುನರವರು, ನಿವೃತ್ತ ಪ್ರಾಚಾರ್ಯರಾದ ಕೆ. ಮಂಜುಲಿAಗಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಅಜ್ಜಯ್ಯ ನಾಡಿಗರ್, ಕಾರ್ಯದರ್ಶಿಯಾದ ವೈ.ಎನ್. ಮಂಜುನಾಥ, ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ತುರುವನೂರು ಬಾಬುರೆಡ್ಡಿ ಮುಂತಾದವರು ಸಭೆಯನ್ನುದ್ದೇಶಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಪ್ರಾರಂಭದಲ್ಲಿ ಗದುಗಿನ ಶ್ರೀ ಶಶಿಕುಮಾರ್ ಪ್ರಾರ್ಥನೆ ಸಲ್ಲಿಸಿದರು. ಬಿ.ಎಂ. ವೀರಭದ್ರಪ್ಪ ಸ್ವಾಗತಿಸಿ, ಮಂಜುಲಿAಗಪ್ಪ ವಂದಿಸಿದರು. ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳಾದ ಶ್ರೀ ಹುರುಳಿ ಬಸವರಾಜ ಇವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಬಂದ ಭಕ್ತಾದಿಗಳಿಗೆ ಮಠದ ವತಿಯಿಂದ ಮಹಾಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

