ಬೆಂಗಳೂರು, ಜು.4: ಹಾಸನ ಜಿಲ್ಲೆ ಯಸಳೂರು ಅರಣ್ಯ ವಲಯದ ಡಬ್ಬಲಿ ಕಟ್ಟೆ ನೆಡುತೋಪಿನಲ್ಲಿರುವ ಅರ್ಜುನ ಆನೆಯ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಜು.6ರಂದು ಮಧ್ಯಾಹ್ನ 12.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 4ರಂದು ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಮದವೇರಿ ದಾಳಿ ಮಾಡಿದ ಆನೆಯೊಂದಿಗೆ ವೀರಾವೇಶದಿಂದ ಹೋರಾಡಿ ಹುತಾತ್ಮನಾದ ದಸರಾ ಆನೆ ಅರ್ಜುನನಿಗೆ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಘೋಷಿಸಿತ್ತು, ಅದರಂತೆ ನಾಡಿದ್ದು ಶನಿವಾರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಧಿ ಸ್ಥಳ ಯಸಳೂರಿನಲ್ಲಿ ಮೊದಲಿಗೆ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು, ಈ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸ್ಥಳೀಯ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಶೀಘ್ರವೇ ಅರ್ಜುನ ಆನೆಯಿದ್ದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಬಳ್ಳೆಯಲ್ಲಿ ಕೂಡ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಎರಡೂ ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದು ಜೊತೆಗೆ 8 ಬಾರಿ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಸೆರೆ ಯಶಸ್ವೀ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನ ಮಾನಸದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.